ನಂಬಿ ನೆಚ್ಚದಿರು ನರಲೋಕ ಸುಖವೆಂಬ

ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ
ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ

ದುರುಳಜನರ ಸಂಗವೆಂಬುದು ಎಂದಿಗೂ
ನೊಣ ಬೆರಸಿದ ಊಟ
ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ
ಮರೆ ಮೋಸಗೊಳಿಸುವ ಸತಿಸುತರೆಂಬೋದೆ
ಕೇವಲ ಯಮಕಾಟ
ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ ||1||

ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ,
ಹಾರಿ ಹೋಗುವ ಹೊಟ್ಟು
ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು
ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು
ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು ||2||

ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ
ಅಲ್ಪ ಸಂತೋಷನಾಗು ಅದು ನಿನಗೆ
ನೋಡು ಹಾಲುಸಕ್ಕರೆ ತುಪ್ಪ
ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ
ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ||3||

ಹರಿಗರ್ಪಿಸದ ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ
ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ
ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ
ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ||4||

ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ
ಸಾವಿರಕೊಂದೆ ಮಾತು ಹರಿದಾಸನೆನಿಸೋದು
ಪರಿಪರಿಯಾಸ್ವಾದ
ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ
ಸೇವಿಸದವನೆ ನಿತ್ಯ ನರಕವಾಸ ಎನ್ನತಲಿದೆ ವೇದ ||5||

Leave a Reply

*

This site uses Akismet to reduce spam. Learn how your comment data is processed.