ರಾಯ ಬಾರೋ ತಂದೆ ತಾಯಿ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನ್ ಕಾಯಿ ಬಾರೋ |

ಮಾಯಿಗಳ ಮರ್ದಿಸಿದ ರಾಘವೇಂದ್ರ, ರಾಯ ಬಾರೋ ||ಪ||

ವಂದಿಪ ಜನರಿಗೆ, ಮಂದಾರ ತರುವಂತೆ | ಕುಂದದಭೀಷ್ಟವ ಸಲಿಸುತಿರ್ಪೆ |

ರಾಯ ಬಾರೋ ಕುಂದದಭೀಷ್ಟವ ಸಲಿಸುತಿರ್ಪೆ ಸರ್ವಜ್ಞ |

ಮಂದನ ಮತಿಗೆ ರಾಘವೇಂದ್ರ , ರಾಯ ಬಾರೋ ||

ಆರು ಮೂರು ಏಳು ನಾಲ್ಕು ಎಂಟು ಗ್ರಂಥ | ಸಾರಾರ್ಥ ತೋರಿದಿ ಸರ್ವರಿಗೆ ನ್ಯಾಯದಿಂದ |

ರಾಯ ಬಾರೋ ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ |

ಸೂರಿಗಳರಸನೆ ರಾಘವೇಂದ್ರ , ರಾಯ ಬಾರೋ ||

ರಾಮಪದಾಬ್ಬ ಸತತ ಶ್ರುಂಗ ಕೃಪಾಂಗ | ಭ್ರಾಮಕ ಜನರ ಮಾನಭಂಗ |

ರಾಯ ಬಾರೋ ಭ್ರಾಮಕ ಜನರ ಮಾನಭಂಗ ಮಾಡಿದ|

ಧೀಮಂತರೆಡೆಯ ರಾಘವೇಂದ್ರ , ರಾಯ ಬಾರೋ ||

ಭಾಸುರ ಚರಿತನೆ ಭೂಸುರ ವಂದ್ಯನೆ | ಶ್ರೀ ಸುಧೀಂದ್ರಾರ್ಯರ ವರಪುತ್ರಾ |

ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರಾನೆನಿಸಿದೆ

ದೈಶಿಕರೊಡೆಯ ರಾಘವೇಂದ್ರ , ರಾಯ ಬಾರೋ ||

ಭೂತಳನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ |

ರಾಯ ಬಾರೋ ಪ್ರೇತತ್ವ ಕಳೆದ ಮಹಿಷಿಯಾ |

ಮಹ ಮಹಿಮ ಜಗನ್ನಾಥ ವಿಠಲನ ಪ್ರೀತಿ ಪಾತ್ರಾ || ರಾಯ ಬಾರೋ

Leave a Reply

*

This site uses Akismet to reduce spam. Learn how your comment data is processed.